ದಿನಾಂಕ 09.04.2022 (ಶನಿವಾರ) ರಿಂದ 19.04.2022 (ಮಂಗಳವಾರ) ರವರೆಗೆ
ಕಳೆದ ಎರಡು ವರ್ಷಗಳಿಂದ, ಕರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜಾಜಿನಗರದ ಶ್ರೀ ರಾಮಮಂದಿರದಲ್ಲಿ, ಶ್ರೀ ರಾಮನವಮಿ ಹಬ್ಬವನ್ನು ಆಚರಿಸುವ ಅವಕಾಶವನ್ನು ಕಳೆದುಕೊಂಡ ಕಾರಣ, ಪ್ರಸ್ತುತ ವರ್ಷದಲ್ಲಿ 66 ನೇ ಸಾಲಿನ “ಶ್ರೀ ರಾಮೋತ್ಸವ-2022” ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಬಹಳ ಹಿಂಜರಿಕೆ ಉಂಟಾಯಿತು.
ಆದರೆ, ಆ ಭಗವಂತನಲ್ಲಿ ನಂಬಿಕೆ ಇಟ್ಟು, ನಾವು ಬಹಳ ಶ್ರದ್ಧೆಯಿಂದ, ಬಹಳ ಅದ್ದೂರಿಯಾಗಿ 66ನೇ ಸಾಲಿನ ಶ್ರೀ ರಾಮನವಮಿಯ ಒಂಭತ್ತು ದಿನಗಳ ಕಾರ್ಯಕ್ರಮಗಳನ್ನು ನಡೆಸಲು ಪೂರ್ವಭಾವಿಯಾಗಿ ಸಿದ್ಧತೆಗಳನ್ನು ಮಾಡಿಕೊಂಡೆವು
ಶ್ರೀ ರಾಮನವಮಿಯ ಕಾರ್ಯಕ್ರಮಗಳನ್ನು ಒಂಭತ್ತು ದಿನಗಳವರೆಗೆ ನಿಯೋಜಿಸಲಾಗಿತ್ತು. ದಿನಾಂಕ 09.04.2022 ರಂದು ಸಂಜೆ ಅಂಕುರಾರ್ಪಣೆ ಮತ್ತು ಧ್ವಜಾರೋಹಣದೊಂದಿಗೆ ಶ್ರೀ ರಾಮನವಮಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೂವಿನ ಅಲಂಕಾರ ಹಾಗೂ ಬಣ್ಣ ಬಣ್ಣದ ದೀಪಾಲಂಕಾರಗಳಿಂದ ಅಲಂಕರಿಸಲಾದ ಶ್ರೀ ರಾಮಮಂದಿರವು ಬಹಳ ಆಕರ್ಷಣೀಯವಾಗಿ ಮನಸ್ಸಿಗೆ ಮುದ ನೀಡುವಂತಿತ್ತು ಭಕ್ತಾಧಿಗಳೆಲ್ಲರೂ ಈ ಅಲಂಕಾರವನ್ನು ತುಂಬು ಹೃದಯದಿಂದ ಪ್ರಶಂಸಿದರು
ದಿನಾಂಕ 10.04.2022 ರಂದು, ಬೆಳಿಗ್ಗೆ ಸಾಂಪ್ರದಾಯಿಕ ಅಭಿಷೇಕದ ನಂತರ, ಶ್ರೀ ರಾಮ, ಸೀತಾ, ಲಕ್ಷ್ಮಣ ಉತ್ಸವ ಮೂರ್ತಿಗಳನ್ನು ಸುಂದರವಾಗಿ ಅಲಂಕರಿಸಿ, ವೈಭವದಿಂದ ವರ್ಣರಂಜಿತವಾಗಿ ಅಲಂಕರಸಿದ, ಸುಸಜ್ಜಿತವಾದ ರಥದಲ್ಲಿ, ನಾಗಸ್ವರ, ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ ಕಲಾವಿದರ ತಂಡಗಳೊಂದಿಗೆ ಮತ್ತು ರಿತ್ವಿಕರ ವೇದ ಮತ್ತು ದಿವ್ಯ ಪ್ರಬಂಧಗಳ ಪಠಣೆಯೊಂದಿಗೆ, ರಾಜಾಜಿನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗಯನ್ನು ನಡೆಸಲಾಯಿತು. ಸುಮಾರು 50ಕ್ಕೂ ಹೆಚ್ಚು ಕಲಾವಿದರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ರಾಮಮಂದಿರದ ಒಳಗೆ-ಹೊರಗೆ ಹಾಗೂ ಸುತ್ತಮುತ್ತಲೂ ಜಾತ್ರೆಯ ವಾತಾವರಣವಿತ್ತು. ಶ್ರೀ ರಾಮನನ್ನು ಹೊಸ ಆಭರಣಗಳಿಂದ ಅಲಂಕರಿಸಲಾಗಿತ್ತು ರಾಜಾಜಿನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಹಾಗೂ ದೂರದ ಪ್ರದೇಶದಿಂದ ಭಕ್ತಾಧಿಗಳು ಬಂದು ತುಂಬು ಹೃದಯದಿಂದ ಶ್ರೀರಾಮನ ದರ್ಶನವನ್ನು ಪಡೆದರು. ಶ್ರೀ ರಾಮನವಮಿಯ ದಿನವಾದ ಇಂದು ಸುಮಾರು 15,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿ ದರ್ಶನ ಭಾಗ್ಯವನ್ನು ಪಡೆದರು. ಆಡಳಿತ ಮಂಡಳಿಯವರು ಬಹಳ ಸುಸಜ್ಜಿತವಾಗಿ, ಯಾವುದೇ ರೀತಿಯಲ್ಲಿ ಭಕ್ತಾಧಿಗಳಿಗೆ ತೊಂದರೆಯಾಗದಂತೆ, ಹಿರಿಯನಾಗರೀಕರಿಗೆ ಅನುಕೂಲವಾಗುವ ರೀತಿಯಲ್ಲಿ ಪೂರ್ವಭಾವಿ ಸಿದ್ಧತೆಯೊಂದಿಗೆ ವ್ಯವಸ್ಥೆ ಮಾಡಿದ್ದರು. ಭಕ್ತಾಧಿಗಳಿಗೆ ಸಿಹಿ ಅವಲಕ್ಕಿಯೂ ಸೇರಿದಂತೆ ಪಾನಕ, ಕೋಸಂಬರಿ, ಮಜ್ಜಿಗೆ ಹಾಗೂ ಲಡ್ಡು ಪ್ರಸಾದವನ್ನು ನೀಡಲಾಯಿತು.
ಪ್ರತೀ ದಿವಸ ಭಗವಂತನಿಗೆ ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗುತ್ತಿತ್ತು. ದಿನಾಂಕ 14 ಮತ್ತು 18 ರಂದು ಅನ್ನಸಂತರ್ಪಣೆ-ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಎರಡೂ ದಿನಗಳಂದು ನಾಗಸ್ವರ ಮತ್ತು ಇತರೆ ಕಲಾವಿದರ ತಂಡಗಳೊಂದಿಗೆ ರಥೋತ್ಸವ ಮೆರವಣಿಗೆ ಮಾಡಲಾಯಿತು. 2500 ಕ್ಕೂ ಹೆಚ್ಚಿನ ಭಕ್ತಾಧಿಗಳು ಮಹಾಪ್ರಸಾದವನ್ನು ಸ್ವೀಕರಸಿದರು.
ದಿನಾಂಕ 11ರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತಾಧಿಗಳ ಅನುಕೂಲಕ್ಕಾಗಿ, ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರ ಮಾಡಲಾಯಿತು. ಈ ಎಲ್ಲಾ ಕಾರ್ಯಕ್ರಮಗಳ ಜೊತೆಗೆ ನಿಯಮಿತವಾಗಿ ನಡೆಸುವ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಸಂಕಷ್ಟಹರ ಪೂಜೆಯನ್ನು ನಿರ್ವಹಿಸಲಾಯಿತು. ಈ ಒಂಭತ್ತು ದಿನಗಳಲ್ಲಿ ಮೂರು ಹೋಮಗಳನ್ನು ನೆರವೇರಿಸಲಾಯಿತು. ಈ ಒಂಭತ್ತು ದಿನಗಳ ಕಾಲ ನುರಿತ ಕಲಾವಿದರ ತಂಡಗಳು ಮನಸ್ಸಿಗೆ ಮುದ ನೀಡುವಂತಹ ನೀಡಿದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಧ್ಯಾತ್ಮಿಕ ಸಂಭ್ರಮವು ಯಾವುದೇ ಅಡೆತಡೆಯಿಲ್ಲದೇ ನಿರಂತರವಾಗಿ ಸುಸಜ್ಜಿತವಾಗಿ ನಡೆಯಿತು.
ಶ್ರೀ ರಾಮನವಮಿಯ ಪ್ರಯುಕ್ತ ಭಾಗವಹಿಸಿದ ಎಲ್ಲಾ ಸೇವಾಕರ್ತರಿಗೆ, ತಮ್ಮ ಮ:ನಪೂರ್ವಕವಾಗಿ ಪೂಜೆಯನ್ನು ನೆರವೇರಿಸಲು ಅನುಕೂಲ ಮಾಡಿಕೊಡಲಾಯಿತು ಹಾಗೂ ಅವರಿಗೆ ಪ್ರಸಾದವನ್ನು ನೀಡಲಾಯಿತು. ಭಕ್ತಾಧಿಗಳಿಗೆ ದೇವಾಲಯದಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಭಾರಿ ಪ್ರಸಾದವನ್ನು ನೀಡಲಾಗುತ್ತಿತ್ತು
ಭಕ್ತಾಧಿಗಳು, ಸೇವಾಕರ್ತರು, ವಿದ್ಯುತ್, ಧ್ವನಿ, ಬೆಳಕಿನ ಸೇವೆ ಒದಗಿಸುವವರು, ಹೂ ಅಲಂಕಾರದವರು, ಕಲಾವಿದರ ತಂಡದವರು, ಮೂರು ಕ್ಯಾಟರರ್ಸ್, ಅಡುಗೆ ಸಾಮಗ್ರಿ ಪೂರೈಕೆದಾರರು, ಪೂಜಾ ಸಾಮಗ್ರಿ ಪೂರೈಕೆದಾರರು, ಪೊಲೀಸ್ ಇಲಾಖೆಯ ಸಿಬ್ಬಂದಿಯವರು, ಕೆ.ಇ.ಬಿ. ಸಿಬ್ಬಂದಿಯವರು, ಬಿ.ಡಬ್ಲೂ.ಎಸ್.ಎಸ್.ಬಿ. ಸಿಬ್ಬಂದಿಯವರು, ಸ್ವಯಂ ಸೇವಕರು, ಪ್ರಸಾದ ನೀಡುವ ಸಾಮಗ್ರಿಗಳ ವಿತರಕರು ಸನ್ಮಾನ ಕೊಡುಗೆಗಳ ವಿತರಕರು, ಅಲಂಕಾರ ವಸ್ತುಗಳ ವಿತರಕರು, ಹೀಗೆ ಎಲ್ಲಾ ಜನರೊಂದಿಗೆ ಸಂವಹನೆ ಮಾಡುವುದು ಮತ್ತು ವ್ಯವಹರಿಸುವುದು ಒಂದು ದೊಡ್ಡದಾದ ಕಾರ್ಯವಾಗಿತ್ತು.
ಶ್ರೀ ರಾಮನವಮಿಯ ಪ್ರಯುಕ್ತ ಆಯೋಜಿಸಲಾದ ಒಟ್ಟು 20 ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ, ಸಂಗೀತ, ನೃತ್ಯ, ಭರತನಾಟ್ಯ, ವಯೊಲಿನ್, ವೀಣಾವಾದನ, ದೇವರನಾಮಗಳು, ಗಾಯನ, ನೃತ್ಯರೂಪಕ, ಯಕ್ಷಗಾನ ಹೀಗೆ ಹಲವಾರು ವಿವಿಧ ಕಾರ್ಯಕ್ರಮಗಳನ್ನೊಳಗೊಂಡು, ಸುಮಾರು 200ಕ್ಕೂ ಹೆಚ್ಚಿನ ಕಲಾವಿದರು ಭಾಗವಹಿಸಿ, ಸಂಜೆ 5.30 ರಿಂದ ರಾತ್ರಿ 10.00 ರವರೆಗೆ ನಡೆಯುತ್ತಿತ್ತು ಆಯೋಜಿಸಿದ್ದ ಈ ಎಲ್ಲಾ ಕಾರ್ಯಕ್ರಮಗಳು ಬಹಳ ದೊಡ್ಡ ಪ್ರಮಾಣದ್ದಾಗಿದ್ದು ಮನಸ್ಸಿಗೆ ಮುದ ನೀಡುವಂತಿತ್ತು.
ನಮ್ಮ ವೇದಿಕೆಯಲ್ಲಿ ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಖ್ಯಾತಿಯ ಕಲಾವಿದರು ಪ್ರದರ್ಶನ ನೀಡಿದ್ದಾರೆ. ಅವರುಗಳಲ್ಲಿ, ವಿದ್ವಾನ. ಶ್ರೀ ಟಿ.ವಿ ರಾಮಪ್ರಸಾದ್., ವಿದ್ವಾನ್ ಡಾ. ಶ್ರೀ ನೈವೇಲಿ ಸಂತಾನ ಗೋಪಾಲನ್, ವಿದ್ವಾನ್ ಮಾದೊಕರಂ ಪ್ರಶಾಂತ್ ಅಯ್ಯಂಗಾರ್, ವಿದುಷಿ ಶ್ರೀಮತಿ ಡಾ.ಜೋತ್ಸ್ನಾ ಶ್ರೀಕಾಂತ್, ಗಾನಚೇತನ ಶ್ರೀ ಮೈಸೂರು ರಾಮಚಂದ್ರಾಚಾರ್, ವಿದುಷಿ ಅರಣ್ಯ ನರೈನ್ ಮತ್ತು ಶಿಷ್ಯವೃಂದದವರು ಕೈಶಿಕಿ ನೃತ್ಯ ವಾಹಿನಿ ತಂಡ, ನಟರಾಜ ನಾಟ್ಯ ಕಲಾಕೇಂದ್ರ, ರಚನಾ ಡ್ಯಾನ್ಸ್ ಅಕಾಡೆಮಿ, ವಿದುಷಿ ಶ್ರೀಮತಿ ಗಾಯತ್ರಿ, ಸಭಾಪತಿ ಸಾಂಸ್ಕೃತಿಕ ಕೇಂದ್ರ, ಗಾನಚೇತನ ಶ್ರೀ ಹುಸೇನ್ ಸಾಬ್, ಕರ್ನಾಟಕ ಯಕ್ಷಗಾನ ಕಲಾವಿದರ ತಂಡದವರು ಮತ್ತು ಭಜನೆ ತಂಡದವರು.
ಭಗವಂತನ ಕೃಪೆ, ಭಕ್ತಾಧಿಗಳ ಮತ್ತು ಹಿತೈಶಿಗಳ ಆಶೀರ್ವಾದದಿಂದ, ಯಾವುದೇ ಅಹಿತಕರ ಘಟನೆ ಇಲ್ಲದೇ, ನಿರ್ವಿಘ್ನವಾಗಿ, ಶ್ರೀ ರಾಮನವಮಿ ಹಬ್ಬದ ಆಚರಣೆಯು ನೆರವೇರಿತು. ಶ್ರೀ ರಾಮಮಂದಿರದ ಭಕ್ತಾಧಿಗಳು ಈ ರೀತಿಯ ವಿಶೇಷವಾದ ಮತ್ತು ಸುಂದರವಾದ, ಸುಸಜ್ಜಿತವಾದಾ ಶ್ರೀ ರಾಮನವಮಿಯ ಆಚರಣೆಯನ್ನು ಹಿಂದೆಂದೂ ನೋಡಿಲ್ಲವೆನ್ನುತ್ತಿದ್ದಾರೆ. ಈ ಕಾರ್ಯಕ್ರಮಯ ಅವರ ಜೀವಿತಾವಧಿಯಲ್ಲಿ ಮತ್ತು ಶ್ರೀ ರಾಮಮಂದಿರದ ಇತಿಹಾಸದಲ್ಲೇ ಒಂದು ಐತಿಹಾಸಿಕ ಮೈಲುಗಲ್ಲು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀ ರಾಮಮಂದಿರದ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು, ಸಿಬ್ಬಂದಿವರ್ಗದವರು, ಅರ್ಚಕರು, ರಿತ್ವಿಕರಿಗೆ, ಪರ್ಯಾಯ ಸಿಬ್ಬಂದಿ ವರ್ಗದವರು, ಮಾಧ್ಯಮದವರು, ವರದಿಗಾರಾರು, ಸಾಮಾಜಿಕ ಮಾಧ್ಯಮದವರು, ಸಾಂಸ್ಕೃತಿಕ ತಂಡದವರು, ಮುದ್ರಣ ಮತ್ತು ಪ್ರಚಾರ ತಂಡದವರು, ಕಾರ್ಯಕ್ರಮದ ನೇರಕಾರ್ಯಕ್ರಮದ ಪ್ರಸಾರಕ್ಕೆ ಸಹಕರಸಿದವರು, ದಾನಿಗಳು, ಸ್ವಯಂ ಸೇವಕರು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಕಳೆದ ಒಂದೂವರೆ ತಿಂಗಳಿಂದ ಈ ಕಾರ್ಯಕ್ರಮವು ಯಶಸ್ವಿಯಾಗಲು ಶ್ರಮಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು, ನಿಮ್ಮೆಲ್ಲರ ಸಹಕಾರವಿಲ್ಲದೇ ಈ ಕಾರ್ಯಕ್ರಮವು ಯಶಸ್ವಿಯಾಗುತ್ತಿರಲಿಲ್ಲ
“ಶ್ರೀ ರಾಮೋತ್ಸವ-2022” – ಶ್ರೀ ರಾಮನವಮಿ ಹಬ್ಬದ ಆಚರಣೆಯ ಈ ಕಾರ್ಯಕ್ರಮವು, 2021ರ ಮಾರ್ಚ್ ತಿಂಗಳಲ್ಲಿ ನಡೆದ “ಮಹಾಕುಂಭಾಭಿಷೇಕ” ಕಾರ್ಯಕ್ರಮದ ನಂತರ ನಡೆದ ಎರಡನೇ ಯಶಸ್ವೀ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಆಯೋಜಿಸಲು ಹೆಚ್ಚಿನ ಸಮಯ, ಶ್ರಮ ಮತ್ತು ಶಕ್ತಿಯನ್ನು ಪಡೆಯಿತಾದರೂ, ಪ್ರತಿಫಲವಾಗಿ ಭಕ್ತಾಧಿಗಳು ಪೂರ್ಣಪ್ರಮಾಣದ ಅಂಕಗಳನ್ನು ನೀಡಿದ್ದಾರೆ. ಈ ಮೂಲಕ ಭಗವಂತ ಶ್ರೀ ರಾಮನಿಗೆ ನಮ್ಮ ಅಳಿಲು ಸೇವೆ ಸಂದಾಯವಾಗಿದೆ
ಶ್ರೀ ರಾಮಮಂದಿರದ ಈ ಒಂದು ಐತಿಹಾಸಿಕ ಯಶಸ್ಸಿನ ಕಾರ್ಯಕ್ರಮಕ್ಕೆ ನೇರವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯಬ್ಬರಿಗೂ ನಮ್ಮ ಹೃತ್ಫೂರ್ವಕ ಧನ್ಯವಾಗಳು
|| ಜೈ ಶ್ರೀ ರಾಮ||
